ಬಕೂನಿನ್
	1814-76 ಕ್ರಾಂತಿಕಾರಿ ರಷ್ಯದ ಅರಾಜಕತಾವಾದಿ ಮತ್ತು ಪ್ರಭಾವಿ ರಾಜಕೀಯ ಬರಹಗಾರ, ಮಿಹಾಯಿಲ್ ಅಲೆಕ್ಸಾಂದ್ರೊವಿಚ್ ಬಕೊನಿನ್ ಮಾಸ್ಕೋಗೆ ವಾಯುವ್ಯದಲ್ಲಿ ಸುಮಾರು 161 ಕಿ.ಮೀ. ದೂರದಲ್ಲಿರುವ ಕಲೀನನ್ ಪ್ರಾಂತ್ಯದ ಪ್ರಿಮುಖಿನೊ ಎಂಬಲ್ಲಿ 1814 ಮೇ 30ರಂದು ಜನಿಸಿದ. ಇವನ ತಂದೆ ಶ್ರೀಮಂತ, ಹಾಗೂ ಮುತ್ಸದ್ದಿಯಾಗಿದ್ದರು. ಹದಿನೈದನೆಯ ವಯಸ್ಸಿನಲ್ಲಿ ಸೆಂಟ್‍ಫಿಟರ್ಸ್ ಬರ್ಗ್‍ನಲ್ಲಿ 3 ವರ್ಷಗಳ ಸೈನಿಕ ಶಿಕ್ಷಣ ಪಡೆದು ಸಾಮ್ರಾಟರ ರಕ್ಷಕದಳದಲ್ಲಿ ಅಧಿಕಾರಿಯಾಗಿ ಸೇರಿದ ಈತನನ್ನು 1832ರಲ್ಲಿ ಪೂರ್ವಪೋಲೆಂಡಿನ ಫಿರಂಗಿನಲ್ಲಿ ಸೇವೆ ಸಲ್ಲಿಸಲು ನಿಯಮಿಸಲಾಯಿತು. ಪೋಲೆಂಡಿನ ದಂಗೆಯ ಸಂದರ್ಭದಲ್ಲಿ ನಡೆದ ಕ್ರೌರ್ಯದಬ್ಬಾಳಿಕೆಗಳನ್ನು ಕಂಡು ಬೇಸರ ಹೊಂದಿದ ಬಕೂನಿಲ್ 1834ರಲ್ಲಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ. ಅನಂತರ ತತ್ತ್ವಶಾಸ್ತ್ರವನ್ನು ಅಭ್ಯಾಸ ಮಾಡಲು ಮಾಸ್ಕೋಗೆ ತೆರಳಿದ. 1840ರಲ್ಲಿ ಪಡೆದಿದ್ದ ಹೆಗೆಲ್ ವಿಚಾರ ಮತ್ತು ತತ್ತ್ವ ಈತನನ್ನು ಆಕರ್ಷಿಸಿತಾದರೂ “ಇರುವುದು ವಿವೇಕವಾದುದು” ಎಂಬ ಹೆಗೆಲ್ ತತ್ತ್ವವನ್ನು ಈತ ಒಪ್ಪಲಿಲ್ಲ. ಕ್ರಾಂತಿಕಾರಿ ಮನೋಭಾವನೆಯ ಈತ ತರುಣ ಹೆಗೆಲಿಯನ್ನರ ಪರಿಚಯ ಮಾಡಿಕೊಂಡ. ಇದೇ ಸಂದರ್ಭದಲ್ಲಿ ಸ್ವಿಟ್‍ಜûರ್‍ಲೆಂಡಿಗೆ ಹೋಗಿ ಅಲ್ಲಿದ್ದ ತರುಣ ಜರ್ಮನ್ ಕಮ್ಯೂನಿಸ್ಟ್‍ರೊಡನೆ ಸ್ನೇಹ ಸಂಪಾದಿಸಿದ. ಅಲ್ಲಿಯ ಅಧಿಕಾರವರ್ಗ ಈತನ ಚಲನವಲನಗಳನ್ನು ಗಮನಿಸುತ್ತಿದ್ದುದರಿಂದಲೂ ರಷ್ಯನ್ ಸರ್ಕಾರ ಈತನನ್ನು ಹಿಡಿದು ಕಳುಹಿಸಬೇಕೆಂದು ಪ್ರಾರ್ಥಿಸಿದ್ದರಿಂದಲೂ ಬಕೂನಿನ್ ಸ್ವಿಟ್‍ಜûರ್‍ಲೆಂಡನ್ನು ಬಿಟ್ಟು ಫ್ರಾನ್ಸಿಗೆ ಬಂದ.

	ಪ್ಯಾರಿಸಿನಲ್ಲಿ ಇದ್ದ ಸುಮಾರು ನಾಲ್ಕು ವರ್ಷಗಳ (1843-47) ಅವಧಿಯಲ್ಲಿ ಕಾರ್ಲ್ ಮಾಕ್ರ್ಸ್, ಫೆಡ್ರರಿಕ್ ಎಂಗಲ್ಸ್ ಮತ್ತು ಪ್ರೌದಾನ್‍ರವರ ಗೆಳತನ ಮಾಡಿದ್ದಲ್ಲದೆ ಅನೇಕ ಗುಪ್ತವಾದ ಕ್ರಾಂತಿಕಾರೀ ಚಳುವಳಿಗಳನ್ನು ಪ್ರೋತ್ಸಾಹಿಸಿದ ಮತ್ತು ಅನೇಕ ಲೇಖನಗಳನ್ನು ಬರೆದ. 1847ರಲ್ಲಿ ಒಂದು ಬಹಿರಂಗ ಸಭೆಯಲ್ಲಿ ಹಿಂದೆ ನಡೆದ ಪೋಲಿಸ್ ದಂಗೆಯನ್ನು ಹೊಗಳಿ ರಷ್ಯದ ನಿರಂಕುಶ ಪ್ರಭುತ್ವವನ್ನು ಕಟುವಾಗಿ ಟೀಕಿಸಿದ್ದರಿಂದ ಫ್ರಾನ್ಸ್‍ನ್ನು ಬಿಟ್ಟುಹೋಗಬೇಕೆಂದು ಫ್ರೆಂಚ್ ಸರ್ಕಾರ ಆಜ್ಞೆ ಮಾಡಿತು. ಬಕೂನಿನ್ ಪ್ಯಾರಿಸ್ ಬಿಟ್ಟು ಬ್ರಸಲ್ ನಗರಕ್ಕೆ ಹೋಗಿ ಕಾರ್ಲ್‍ಮಾಕ್ಸ್‍ರೊಡನೆ ಮತ್ತೆ ಕಲೆತ. ಅದರೆ ಅವರಿಬ್ಬರಲ್ಲಿ ಅಷ್ಟೇನೂ ಅನ್ಯೋನ್ಯತೆ ಇರಲಿಲ್ಲವೆಂಬುದು ಗೆಳೆಯನೊಬ್ಬನಿಗೆ ಬರೆದ ಈತನ ಪತ್ರದಿಂದ ತಿಳಿದುಬರುತ್ತದೆ.

	ಬಕೂನಿನ್ ಫ್ರಾನ್ಸಿನ ಕ್ರಾಂತಿಯ (1848) ಸಂದರ್ಭದಲ್ಲಿ ಮತ್ತೆ ಪ್ಯಾರಿಸಿಗೆ ಹೋಗಿ, ಅಲ್ಲಿಂದ ಪೋಲೆಂಡಿನಲ್ಲಿ ನಡೆಯುತ್ತಿದ್ದ ಗಲಭೆಗಳಲ್ಲಿ ಭಾಗವಹಿಸಲು ಪ್ರಯಾಣ ಮಾಡುತ್ತಿದ್ದಾಗ ಜರ್ಮನ್ ಸರ್ಕಾರ ಈತನನ್ನು ಬಂಧಿಸಿ, ಪೋಲೆಂಡಿಗೆ ಹೋಗಕೂಡದೆಂಬ ಕಟ್ಟಳೆ ವಿಧಿಸಿ ಬಿಡುಗಡೆ ಮಾಡಿತು. ಮುಂದೆ ಪ್ರಾಗ್‍ನ ಸಮಾವೇಶ ಒಂದರಲ್ಲಿ ಆಸ್ಟ್ರಿಯ, ರಷ್ಯ ಮತ್ತು ಪ್ರಷ್ಯಗಳ ನಿರಂಕುಶ ಅರಸೊತ್ತಿಗೆಯನ್ನು ಮೂಲೋತ್ಪಾಟನ ಮಾಡಬೇಕೆಂದು ಬಕೂನಿನ್ ಮನವಿ ಮಾಡಿಕೊಂಡ. 1848-49ರಲ್ಲಿ ಡ್ರೆಸ್‍ಡನ್ ನಗರದಲ್ಲಿ ಗಲಭೆಗಳುಂಟಾಗಿ ನಗರದ ಆಡಳಿತ ಐದು ದಿನಗಳತನಕ ಕ್ರಾಂತಿಕಾರಿಗಳ ವಶದಲ್ಲಿದ್ದಿತು. ಆ ಸಂದರ್ಭದಲ್ಲಿ ಡ್ರೆಸ್‍ಡನ್ ನಗರದಲ್ಲಿದ್ದ ಈತನನ್ನು ಪ್ರಷ್ಯ ಸರ್ಕಾರ ದಸ್ತಗಿರಿ ಮಾಡಿ ಮರಣದಂಡನೆ ವಿಧಿಸಿತು; ಮತ್ತೆ ಶಿಕ್ಷೆ ಕಡಿಮೆ ಮಾಡಿ ಕಾರಾಗೃಹದಲ್ಲಿ ಇಡಲಾಯಿತು. ಆಗ ಅಸ್ಟ್ರಿಯಾ ಸರ್ಕಾರ ಈತನನ್ನು ಶಿಕ್ಷಿಸುವ ಹಕ್ಕು ತಮಗೆ ಸೇರಿದ್ದೆಂದೂ ಈತನನ್ನು ತಮಗೆ ವರ್ಗಾಯಿಸಬೇಕೆಂದೂ ಕೋರಿತು. ಅದರಂತೆ ಆಸ್ಟ್ರಿಯಾಕ್ಕೆ ಈತನನ್ನು ಕಳುಹಿಸಲಾಗಿ ಅಲ್ಲಿಯೂ ಮೊದಲು ಮರಣದಂಡನೆ ವಿಧಿಸಿ, ಅನಂತರ ಅದನ್ನು ಕಾರಾಗೃಹ ಶಿಕ್ಷೆಗೆ ಇಳಿಸಲಾಯಿತು. ಅಷ್ಟರಲ್ಲಿಯೇ ರಷ್ಯಾ ಸರ್ಕಾರ ಬಕೂನಿನ ತಮ್ಮ ದೇಶದವನಾದ್ದರಿಂದ ಈತನನ್ನು ಶಿಕ್ಷಿಸುವ ಅಧಿಕಾರ ತಮಗೆ ಸೇರಿದ್ದೆಂದು ವಾದಿಸಿತು. ಆದ್ದರಿಂದ ಈತನನ್ನು ರಷ್ಯಕ್ಕೆ ಒಪ್ಪಿಸಿಕೊಟ್ಟಿತು.

	ಸುಮಾರು ಆರು ವರ್ಷಗಳ ಕಾಲ ರಷ್ಯದಲ್ಲಿ ತುರಂಗವಾಸವನ್ನು ಅನುಭವಿಸಿದ ಮೇಲೆ ಈತನನ್ನು ಸೈಬೀರಿಯಾಕ್ಕೆ ಕಳುಹಿಸಲಾಯಿತು. ಬಕೂನಿನ್ ಅಲ್ಲಿಂದ ತಪ್ಪಿಸಿಕೊಂಡು ಜಪಾನ್ ಅಮೆರಿಕಗಳ ಮೂಲಕ ಲಂಡನ್ ಪಟ್ಟಣ (1861) ತಲುಪಿ ಪುನಃ ಅಂತರರಾಷ್ಟ್ರೀಯ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ. 1861ರಿಂದ 1872ರ ತನಕ ಯೂರೋಪಿನ ನಾನಾ ರಾಜ್ಯಗಳಲ್ಲಿ ಸುತ್ತಾಡಿದ. ಸ್ವಿಟ್‍ಜûರ್‍ಲೆಂಡ್ ಸ್ಪೇನ್ ಹಾಗೂ ಇಟಲಿಗಳಲ್ಲಿ ನಡೆದ ಕ್ರಾಂತಿಕಾರಿ ಒಳಸಂಚುಗಳಲ್ಲಿ ಈತನ ಪಾತ್ರ ಇದ್ದಿತೆಂದು ಹೇಳಲಾಗಿದೆ. ಈ ಕಾಲದಲ್ಲಿ ಈತನಿಗೂ ಕಾರ್ಲ್‍ಮಾಕ್ರ್ಸ್‍ನಿಗೂ ಅನೇಕ ಭಿನ್ನಾಭಿಪ್ರಾಯಗಳು ತಲೆದೋರಿದ್ದರಿಂದ 1872ರಲ್ಲಿ ಈತನನ್ನು ಮೊದಲನೆಯ ಇಂಟರ್‍ನ್ಯಾಷನಲ್ ಸೋಷಿಯಲ್ ಡೆಮೋಕ್ರಾಟಿಕ್ ಅಲಯನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ.

	ಬಕೂನಿನ್ನನ ಕೃತಿಗಳಲ್ಲಿ ಕನ್‍ಫಷನ್ಸ್, ಗಾಡ್ ಅಂಡ್ ದಿ ಸ್ಟೇಟ್, ಮಾಕ್ರ್ಸಿಸಮ್ ಫ್ರೀಡಮ್ ಅಂಡ್ ದಿ ಸ್ಟೇಟ್ ಮತ್ತು ಓವರ್ಸ್ ಇವು ಉಲ್ಲೇಖನಾರ್ಹವಾದವು. ಇವನ ಪ್ರಕಾರ ನಿಜವಾದ ತತ್ತ್ವಶಾಸ್ತ್ರ ಮೂಢಭಾವನೆ ಹಾಗೂ ಧಾರ್ಮಿಕ ವಿಷಯಗಳಿಗೆ ವಿರುದ್ಧವಾಗಿರುತಕ್ಕದ್ದು. ನಿಜವಾದ ಧರ್ಮವೆಂದರೆ ರಾಜಕೀಯ ಚಟುವಟಿಕೆ ಹಾಗೂ ರಾಜಕೀಯ ಚಳುವಳಿ. ಅದ್ದರಿಂದ ನಮ್ಮ ಪ್ರಥವi ಕರ್ತವ್ಯ ಈಗ ಇರುವಂಥ ಎಲ್ಲ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಗಳ ಮೂಲೋತ್ಪಾಟನೆ ಮಾಡುವುದು ಎಂಬುದಾಗಿ ತನ್ನ ಗೆಳೆಯರಿಗೆ ಕರೆ ಕೊಟ್ಟ. ದೇವತಾಶಾಸ್ತ್ರ ದೇವರ ವಿಷಯವಾಗಿ ಹೇಳುವ ಸುಳ್ಳಿನಕಂತೆ. ಕಾಯಿದೆಶಾಸ್ತ್ರ ವ್ಯಕ್ತಿಗಳು ಏರ್ಪಡಿಸಿಕೊಂಡಿರುವ ಮಿಥ್ಯಾವ್ಯವಸ್ಥೆ, ಮತ್ತು ದರ್ಶನಶಾಸ್ತ್ರ ಹಾಗೂ ಆದರ್ಶ ಸಿದ್ದಾಂತಗಳು ಪೊಳ್ಳು ಕಥೆಗಳು, ಎಂಬುದಾಗಿ ಹೇಳಿದ `ನಾನು ದೇವರನ್ನು ನಂಬುವುದಿಲ್ಲ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಭಾವನೆ. ಮಾನವನ ಸ್ವಾತಂತ್ರ್ಯದಲ್ಲಿ ಹಾಗೂ ಕ್ರಾಂತಿಯಲ್ಲಿ ನಾನು ದೇವರನ್ನು ಕಂಡುಕೊಳ್ಳುವೆನು ಎಂದು ಹೇಳುತ್ತಿದ್ದ.

	ಬಕೂನಿನ್ ಹಳೆಯ ಪ್ರಪಂಚವನ್ನು ನಾಶಮಾಡಿದ ತರುವಾಯವೇ ಹೊಸ ಪ್ರಪಂಚವನ್ನು ಸೃಷ್ಟಿಸಲು ಸಾಧ್ಯವೆಂಬ ತರ್ಕವನ್ನು ಹೂಡಿದ. ಕುರುಡು ನಂಬಿಕೆಯ ಆಧಾರದ ಮೇಲೆ ರಚಿತವಾದ ರಾಜ್ಯದಿಂದಲೂ ಮಾನವರನ್ನು ಬಿಡುಗಡೆ ಮಾಡಿದ ಬಳಿಕವೇ ಸ್ವಾತಂತ್ರ್ಯದ ಸಾಕ್ಷಾತ್ಕಾರ ಸಾಧ್ಯವೆಂಬುದು ಈತನ ವಾದವಾಗಿತ್ತು.

	ಬಕೂನಿನ ಪ್ರಕಾರ ಉಲ್ಲಂಘನೆ ಮತ್ತು ಪ್ರತಿಭಟನೆಯಿಂದಲೇ ಇದುವರೆಗೂ ಪ್ರಗತಿ ಸಾಧ್ಯವಾಗಿದೆ. ದೇವರ ಆಜ್ಞೆಯನ್ನು ಮೀರಿ ಜ್ಞಾನವೃಕ್ಷದ ಫಲವನ್ನು ತಿಂದುದರಿಂದ ಮಾನವ ವಿವೇಕಿ ಆದ. ಆಲೋಚನೆ ಪ್ರತಿಭಟನೆಯ ಕೂಸು. ಅಧಿಕಾರಿಶಾಹಿಗೆ ವಿರೋಧ, ಪ್ರತಿಭಟನೆ ವ್ಯಕ್ತಪಡಿಸುವುದರಿಂದ ಪ್ರಗತಿಶೀಲವಾದ ಮತ್ತು ಕ್ರಿಯಾತ್ಮಕ ವಿವೇಚನೆ ಹೊರಬರುವುದು. ಅದ್ದರಿಂದ ಎಲ್ಲ ಶಾಸನಗಳಿಗೂ, ಪ್ರಭಾವಗಳಿಗೂ ಅಧಿಕಾರಕ್ಕೂ ವಿಶಿಷ್ಟ ಸ್ಥಾನಮಾನಗಳಿಗೂ ಸಂಪ್ರದಾಯಗಳಿಗೂ ಬಕೂನಿನ್ ವಿರೋಧ ವ್ಯಕ್ತಪಡಿಸಿದ.

	ಸಮಾಜವೆಂಬುದು ಶೋಷಣೆಯ ಸಾಧನೆ. ಸಮಾಜದಲ್ಲಿ ಯಾವಾಗಲೂ ಶೋಷಣೆ ಮಾಡುವ ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನು ನಾನಾ ವಿಧವಾದ ಹಿಂಸೆಗೆ ಗುರಿಮಾಡುವರು. ಆದ್ದರಿಂದ ಎಲ್ಲ ವಿಧವಾದ ಸಂಘಟಿತ ರಾಜಕೀಯ ವ್ಯವಸ್ಥೆಯನ್ನು ರದ್ದು ಮಾಡಬೇಕು. ಬಕೂನ್ನಿನ ಸಮಾನತೆಯ ತತ್ತ್ವದ ಪ್ರಕಾರ ಸಮಾನತೆಯೆಂದರೆ-ಒಂದು ವರ್ಗದ ಆಳ್ವಿಕೆ ಕೊನೆಗೊಂಡು ಮತ್ತೊಂದು ವರ್ಗದವರ ಆಳ್ವಿಕೆಯಲ್ಲ; ಸಮಾನತೆಯೆಂದರೆ ಆಳ್ವಿಕೆಯ ಅಂತ್ಯ. ಆಸ್ತಿ ಸಾಮೂಹಿಕವಾದದ್ದಾಗಿರಬೇಕು. ಪ್ರತಿಯೊಬ್ಬನೂ ದುಡಿಮೆಯಿಂದ ತನ್ನ ಕೂಳನ್ನು ಸಂಪಾದಿಸಬೇಕು ಎಂಬ ಸೇಂಟ್‍ಪಾಲನ ತತ್ತ್ವ ಈತ ಒಪ್ಪಿದ್ದ. ಶ್ರಮ ಬಂಡವಾಳದ ಅಧೀನದಲ್ಲಿರುವವರೆಗೆ ಗುಲಾಮಗಿರಿ ತಪ್ಪಿದ್ದಲ್ಲ. ಆದ್ದರಿಂದ ಬಿಡುಗಡೆಯ ಬೆಲೆಯೆಂದರೆ ಶ್ರಮವನ್ನು ಬಂಡವಾಳದ ಹಿಡಿತದಿಂದ ಮುಕ್ತಿತಗೋಳಿಸುವುದೇ ಆಗಿದೆ.

	ಆದರೆ ಮೇಲೆ ವಿವರಿಸಿದ ಸಮಾಜವನ್ನು ರಚಿಸುವುದು ಹೇಗೆ? ಶಾಂತಿಯಿಂದ, ಸುಧಾರಣೆಯಿಂದ ಅದನ್ನು ತರಲು ಸಾಧ್ಯವೆ? ಬಕೂನಿನ್ನನ ಪ್ರಕಾರ ಅದು ಸಾಧ್ಯವಿಲ್ಲ. ನಾಶಮಾಡುವುದು ಮಾನವನ ಪ್ರವೃತ್ತಿಯಲ್ಲಿ ಸಹಜವಾಗಿಯೆ ಕಂಡುಬರುತ್ತದೆ. ದುಷ್ಟಶಕ್ತಿಗಳನ್ನು ನಾಶಮಾಡಿದಾಗ ರಚನಾತ್ಮಕ ಶಕ್ತಿ ತಾನಾಗಿಯೇ ಬೆಳೆದು ಬರುವುದು. ಆದ್ದರಿಂದ ಕ್ರಾಂತಿ ಸ್ವಾಭಾವಿಕವಾದುದು ಹಾಗೂ ಅಗತ್ಯವಾದುದು. ಗುರಿ ಮತ್ತು ಸಾಧನೆಗಳ ಬಗ್ಗೆ ಹೆಚ್ಚು ವಿಚಾರ ಮಾಡುವ ಗೋಜಿಗೆ ಬಕೂನಿನ್ ಹೋಗಲಿಲ್ಲ. ಕ್ರಾಂತಿಗೆ ಜಯತರುವ ಎಲ್ಲ ಸಾಧನಗಳೂ ಗುರಿಗಳೂ ನೈತಿಕವಾದವು. ಅದಕ್ಕೆ ವಿರೋಧವಾದವೆಲ್ಲ ಅನೈತಿಕವಾದವು. ಕ್ರಾಂತಿ ಕೇವಲ ಒಬ್ಬಿಬ್ಬರ ಕೈವಾಡದಿಂದ ಉಂಟಾಗುವುದಿಲ್ಲ. ಅದು ಸಂದರ್ಭಕ್ಕೆ ಅನುಗುಣವಾಗಿ ವ್ಯಕ್ತಿಗಳ ಇಚ್ಚೆಯನ್ನು ಮೀರಿ ಯಾರ ತಡೆಯೂ ಇಲ್ಲದೆ ಉಂಟಾಗತಕ್ಕಂಥ ವಿಪ್ಲವ. ಬಕೂನಿನ್ ಮಾಕ್ರ್ಸನ ತತ್ತ್ವಗಳನ್ನು ಒಪ್ಪಲಿಲ್ಲ. ಇವನ ಪ್ರಕಾರ ಮಾಕ್ರ್ಸ್ ಶ್ರಮಜೀವಿಗಳನ್ನು ಬುದ್ದಿವಂತರನ್ನಾಗಿಯೂ ಪ್ರಜ್ಞಾವಂತರನ್ನಾಗಿಯೂ ಮಾಡಿ ಅವರಿಗೆ ಆಳ್ವಿಕೆಯ ಹುಚ್ಚನ್ನು ಹಿಡಿಸಿದ. ಇದು ಕ್ರಾಂತಿಯ ಲಕ್ಷಣವನ್ನು ಮಾಕ್ರ್ಸ್‍ವಾದಿ ಸಮಾಜವಾದ ನಮ್ಮ ಕಾಲದ ಅತ್ಯಂತ ಹೇಯವಾದಂಥ ಸುಳ್ಳು ಎಂದು ಬಕೂನಿನ್ ವಾದಿಸಿದ. ಈ ವಿಚಾರವಂತ, ರಾಜಕೀಯ ತತ್ತ್ವಜ್ಞಾನಿ 1876 ಜುಲೈ 2ರಂದು ಸ್ವಿಟ್‍ಜರ್‍ಲೆಂಡಿನಲ್ಲಿ ಕಾಲವಾದ.
(ಎಸ್.ಡಿ,ಎಂ.ಯು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ